ಧ್ಯೇಯೋದ್ದೇಶಗಳು

ವಿಶ್ವವಿದ್ಯಾಲಯದ ಬಗ್ಗೆ


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಕೃತಭಾಷೆಯ ಅನನ್ಯ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯಸರ್ಕಾರದಿಂದ ಸ್ಥಾಪಿತವಾಗಿದೆ. ಸಂಸ್ಕೃತಭಾಷೆಯು ಬಹು ಪ್ರಾಚೀನವಾದ ಮತ್ತು ಉಜ್ಜ್ವಲವಾದ ವೈಜ್ಞಾನಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯ ಮತ್ತು ಪರಂಪರೆಗಳನ್ನು ಹೊಂದಿದೆ. ಈ ಭಾಷೆಯು ಗದ್ಯ, ಪದ್ಯ, ನಾಟಕ, ನಾಟ್ಯ, ಶಿಲ್ಪಕಲೆ, ವರ್ಣಚಿತ್ರ, ಲಲಿತಕಲೆಗಳು, ವೈದ್ಯಶಾಸ್ತ್ರ, ತತ್ತ್ವಜ್ಞಾನ ಮತ್ತು ಇವುಗಳಿಗೆ ಸಂಬಂಧಪಟ್ಟ ಇತರ ಕ್ಷೇತ್ರಗಳಲ್ಲಿಯೂ ಭಾರತೀಯ ವಿದ್ವಾಂಸರು ಈವರೆಗೆ ಮಾಡಿರುವ ಸಾಧನೆಗಿಂತಲೂ ವ್ಯಾಪಕವಾದ ಮತ್ತು ಚಿರಂತನವಾದ ಕೊಡುಗೆಯನ್ನು ನೀಡಿದೆ.

ಅನೇಕ ವರ್ಷಗಳ ಬಹುಯತ್ನದ ಫಲವಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ೨೦೧೦ರಲ್ಲಿ ಸ್ಥಾಪನೆಗೊಂಡಿತು. ಮೈಸೂರು ಮಹಾರಾಜರಿಂದ ಈ ರಾಜ್ಯದಲ್ಲಿ ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಅಧ್ಯಯನವು ಪ್ರೋತ್ಸಾಹವನ್ನು ಪಡೆದು ಆಗ ಸ್ಥಾಪಿತವಾದ ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯನ್ನು ಒಳಗೊಂಡಂತೆ ಕರ್ನಾಟಕದಲ್ಲಿ ಅನೇಕ ಸಂಸ್ಕೃತ ಮಹಾಪಾಠಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ, ರಾಜ್ಯದಲ್ಲಿ ನೂರಾರು ವೇದ-ಸಂಸ್ಕೃತ ಪಾಠಶಾಲೆಗಳೂ ಕ್ರಿಯಾಶೀಲವಾಗಿವೆ. ಈ ಎಲ್ಲ ಶಾಲೆಗಳನ್ನು ಒಂದು ವ್ಯವಸ್ಥೆಯಡಿ ತಂದು, ಒಂದು ಸಮಾನ ಶಿಕ್ಷಣಪದ್ಧತಿಯನ್ನು ರೂಪಿಸಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಂಸ್ಕೃತ ಸಂಶೋಧನೆಯ ಸ್ತರವನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡುವ ಉದ್ದೇಶ್ಯದೊಂದಿಗೆ ಈ ವಿಶ್ವವಿದ್ಯಾಲಯವು ಕಾರ್ಯಾರಂಭ ಮಾಡಿದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಪ್ರಧಾನವಾಗಿ ನಾಲ್ಕು ಅಂಗಗಳನ್ನು ಹೊಂದಿದೆ –

೧. ಬೋಧನಾಂಗ
೨. ಸಂಶೋಧನಾಂಗ
೩. ಪ್ರಸಾರಾಂಗ
೪. ಆಡಳಿತಾಂಗ

ಈ ಅಂಗಗಳ ಮೂಲಕ ವಿಶ್ವವಿದ್ಯಾಲಯದ ಕ್ರಿಯಾಶಕ್ತಿಯನ್ನು ಉನ್ನತೀಕರಿಸಬೇಕಾಗಿದೆ. ಈ ಮೂಲಕ ವಿಶ್ವವಿದ್ಯಾಲಯವು ಕರ್ನಾಟಕದ ಸಂಸ್ಕೃತಸಂಬಂಧಿ ಚಟುವಟಿಕೆಗಳಿಗೆ ಚಾಲನೆಯನ್ನು ನೀಡುತ್ತಿದೆ.

ವಿಶ್ವವಿದ್ಯಾಲಯಕ್ಕಾಗಿ ತಿಪ್ಪಸಂದ್ರ ಗ್ರಾಮದಲ್ಲಿ (ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ) ೧೦೦ ಎಕರೆಗಳ ಭೂಮಿಯನ್ನು ಗುರುತಿಸಲಾಗಿದೆ. ಪ್ರಸ್ತುತ, ೨ ವಿಶ್ವವಿದ್ಯಾಲಯದ ಘಟಕ ಸಂಸ್ಕೃತ ಕಾಲೇಜುಗಳು, ೧೦ ಅನುದಾನಿತ ಕಾಲೇಜುಗಳು ಮತ್ತು ೯ ಅನುದಾನರಹಿತ ಕಾಲೇಜುಗಳು ವಿಶ್ವವಿದ್ಯಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶ್ವವಿದ್ಯಾಲಯವು ಪದವೀಪೂರ್ವ ಸಂಸ್ಕೃತ ಶಿಕ್ಷಣದ ನಿರ್ವಹಣೆಗಾಗಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯವನ್ನು ಕಾರ್ಯಾರಂಭಗೊಳಿಸಿದೆ. ನಿರ್ದೇಶನಾಲಯದಿಂದ ಅಂಗೀಕೃತವಾದ 350 ಪಾಠಶಾಲೆಗಳು ರಾಜ್ಯದಲ್ಲಿ ಕಾರ್ಯನಿರತವಾಗಿವೆ.

ಧ್ಯೇಯೋದ್ದೇಶಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳು


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಈ ಮುಂದಿನ ಧ್ಯೇಯೋದ್ದೇಶಗಳನ್ನು ಹೊಂದಿದೆ
೧. ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ವ್ಯಾಕರಣ, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸಾ, ವೇದಾಂತ ಮುಂತಾದ ವೇದ ಮತ್ತು ಶಾಸ್ತ್ರಾಧ್ಯಯನದಲ್ಲಿ ಹಾಗೂ ಜೈನ ಧರ್ಮಶಾಸ್ತ್ರ ಮತ್ತಿತರ ಪೂರಕಶಿಕ್ಷಣದಲ್ಲೂ ಸಹ ಬೋಧನೆ ಮತ್ತು ಸಂಶೋಧನೆಯ ಅತ್ಯುನ್ನತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದು.

೨. ಕರ್ನಾಟಕದಲ್ಲಿ ದೊರೆಯುವ ಸಂಸ್ಕೃತ ಸಾಹಿತ್ಯದ ವಿಶಿಷ್ಟ ಗುಣಲಕ್ಷಣಗಳಿಗೆ ವಿಶೇಷವಾದ ಒತ್ತನ್ನು ನೀಡಿ ವೇದ, ಆಗಮ ಮತ್ತು ಸಜಾತೀಯ ಸಾಹಿತ್ಯದ ಅಧ್ಯಯನದ ಸಾಂಪ್ರದಾಯಿಕ ಪದ್ಧತಿಯನ್ನು ಸಂರಕ್ಷಿಸುವುದು, ಪೋಷಿಸುವುದು ಮತ್ತು ಉತ್ತೇಜಿಸುವುದು.

೩. ವೇದ ಮತ್ತು ಮೇಲೆ ಹೇಳಿದ ಅಧ್ಯಯನ ವಿಷಯಗಳಲ್ಲಿ ಅಡಗಿರುವ ಜ್ಞಾನಭಂಡಾರವನ್ನು ಹಾಗೂ ಆಧುನಿಕ ಜಗತ್ತಿಗೆ ಅವು ಎಷ್ಟು ಪ್ರಸ್ತುತ ಎಂಬ ಮಹತ್ತ್ವವನ್ನು ಸರ್ವರಿಗೂ ತಿಳಿಯಪಡಿಸುವುದು.

೪.
೧.ಸಂಸ್ಕೃತಭಾಷೆಯಲ್ಲಿ ಉಗಮವಾಗಿ ಬೆಳೆದು ನಿಂತ ಭಗವದ್ಗೀತೆ ಆಧಾರಿತ ಆಡಳಿತವಿಜ್ಞಾನ
೨.ಯೋಗ ಆಧಾರಿತ ಮಾನವ ಮನಃಶಾಸ್ತ್ರ
೩.ಪರಿಸರ ಸಮತೋಲನ ಸಂಬಂಧಿತ ಆರೋಗ್ಯ ಸಂಬಂಧಿ ಸಾಂಪ್ರದಾಯಿಕ ಜ್ಞಾನ
೪.ಪುರಾತತ್ತ್ವಶಾಸ್ತ್ರ
೫.ಪ್ರಾಚೀನವಿಜ್ಞಾನಗಳು
೬.ಆಗಮಶಾಸ್ತ್ರ
೭.ಆಯುರ್ವೇದ
೮.ವಿಜ್ಞಾನ ಮಾನವಿಕ ಶಾಸ್ತ್ರಗಳು
೯.ನಟನ ಕಲೆಗಳು
೧೦.ಲಲಿತಕಲೆಗಳು ಮತ್ತು ಸಂವಾದವಿಜ್ಞಾನ
೧೧.ವೇದಾಧ್ಯಯನ ಮತ್ತು ವೇದ ಭಾಷಾಧ್ಯಯನ ಮತ್ತಿತರ ವಿಜ್ಞಾನಗಳ ರಂಗದಲ್ಲಿ ಮುಂದುವರಿದ ಅಧ್ಯಯನ ಮತ್ತು ಸಂಶೋಧನೆಗೆ ಅನುಕೂಲ ಕಲ್ಪಿಸುವುದು ಮತ್ತು ಅದನ್ನು ನಿಯಂತ್ರಿಸುವುದು.

೫. ವೇದ ಮತ್ತು ಶಾಸ್ತ್ರಗಳಲ್ಲಿ ಜ್ಞಾನಸಂವರ್ಧನೆ ಹಾಗೂ ಪ್ರಜ್ಞೆಯ ಉನ್ನತಸ್ತರಗಳ ಸಾಧನೆಯ ಹಾದಿಯಲ್ಲಿ ಕಂಡುಬರುವ ವಿವೇಚನಾಯುಕ್ತ ತರ್ಕ ಸಮ್ಮತ ವಿಧಾನ ಹಾಗೂ ವೈಜ್ಞಾನಿಕವಾದಂತಹ ನಿಲುವುಗಳು ಎಷ್ಟು ಗಹನವಾದುದು ಎಂಬುದನ್ನು ಸರ್ವರಿಗೂ ವಿಶದಪಡಿಸುವುದು.

೬. ಭಾರತೀಯ ಜ್ಞಾನಪರಂಪರೆಯನ್ನು ಕ್ರೋಢೀಕರಿಸಿ, ಪುನರುಜ್ಜೀವನಗೊಳಿಸಿ ಉತ್ತೇಜಿಸುವುದು ಹಾಗೂ ವೇದ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಒಳಗೊಂಡ ವೈಜ್ಞಾನಿಕ ವಿಚಾರಗಳನ್ನು ವಿಶೇಷವಾಗಿ ಕೃಷಿ, ಖಗೋಳ ಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಮಾನವಿಕಶಾಸ್ತ್ರಗಳು, ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯಶಾಸ್ತ್ರ, ಆಡಳಿತ, ಗಣಿತ, ಲೋಹಶಾಸ್ತ್ರ, ಭೌತಶಾಸ್ತ್ರ, ಸಾಮಾಜಿಕವಿಜ್ಞಾನಗಳಲ್ಲಿ ಅಳವಡಿಸಲು ಹಾಗೂ ಆಧುನಿಕ ವಿಜ್ಞಾನ ಮತ್ತು ತಾಂತ್ರಿಕ ಅಧ್ಯಯನಗಳಲ್ಲಿ ಯೋಗವನ್ನು ಸಮ್ಮಿಲನಗೊಳಿಸುವುದು.

೭. ವೇದದ ಭಾಷ್ಯಗಳ ಹಾಗೂ ವ್ಯಾಖ್ಯಾನಗಳ ಬಗ್ಗೆ ಜನಜಾಗೃತಿ ಮೂಡಿಸುವುದು.

೮. ಒಂದೇ ಬಗೆಯ ಧ್ಯೇಯೋದ್ದೇಶಗಳುಳ್ಳ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಮಾಡಿದ ಪ್ರಯತ್ನಗಳ ಕೂಡುಬಲವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಪರಸ್ಪರ ವ್ಯವಸ್ಥೆಗಳು ಮತ್ತು ಸಂವಾದ ಸಂಪರ್ಕ ಸೌಕರ್ಯಗಳೊಂದಿಗೆ ಅಂಥ ವೇದ ಮತ್ತು ಸಂಸ್ಕೃತ ವಿದ್ಯಾಸಂಸ್ಥೆಗಳ ಮತ್ತು ಶೈಕ್ಷಣಿಕ ಹಾಗೂ ಸಂಶೋಧನಾ ಅಭಿಮುಖ ಸಂಸ್ಥೆಗಳ ಒಂದು ಜಾಲವನ್ನು ರಚಿಸುವುದು.

೯. ಸಂಸ್ಕೃತ ಮತ್ತು ವೇದಗಳಲ್ಲಿರುವ ವಿಚಾರಧಾರೆಯನ್ನು ಒಳಗೊಂಡ ಸಾಹಿತ್ಯ ಭಂಡಾರವನ್ನು ಆಧುನಿಕ ಭಾರತೀಯ ಮತ್ತು ವಿದೇಶಿಭಾಷೆಗಳಲ್ಲಿ ಸೃಷ್ಟಿಸುವುದು.

೧೦. ಎಲ್ಲ ವೇದಗಳು, ಶಾಸ್ತ್ರೀಯ ಕೃತಿಗಳು ಮತ್ತು ಅವಕ್ಕೆ ಸಂಬಂಧಪಟ್ಟ ಗ್ರಂಥಗಳು, ಭಾಷ್ಯಗಳು ಮತ್ತು ವ್ಯಾಖ್ಯಾನಗಳನ್ನು ಕನ್ನಡ ಮತ್ತು ಇತರ ಭಾಷೆಗಳಿಗೆ ಭಾಷಾಂತರಿಸುವುದು ಮತ್ತು ಪ್ರಕಟಿಸುವುದು.

೧೧. ವೇದಪಠನಗಳು ಮತ್ತು ಸಂಬಂಧಪಟ್ಟ ಸಾಂಪ್ರದಾಯಿಕ ಆಚರಣೆಗಳ ಧ್ವನಿ ಮತ್ತು ಧ್ವನಿ-ದೃಷ್ಟಿ ದಾಖಲೆಗಳನ್ನು ತಯಾರಿಸುವುದು.

೧೨. ವಿಶ್ವವಿದ್ಯಾಲಯದಲ್ಲಿ ಅಂತರ-ವ್ಯಾಸಂಗವಿಷಯಗಳ ಅಧ್ಯಯನ ಮತ್ತು ಸಂಶೋಧನೆಯನ್ನು ಉತ್ತೇಜಿಸುವುದು ಮತ್ತು ಅಂತಹುದೇ ಇತರ ಸಂಬಂಧಪಟ್ಟ ಚಟುವಟಿಕೆಗಳನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ಸೌಹಾರ್ದ ರೀತಿಯಲ್ಲಿ ನಡೆಸಿಕೊಂಡು ಬರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು.

೧೩. ಸಂಸ್ಕೃತದಲ್ಲಿ ಒಂದು ಪ್ರಾಚ್ಯವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ಅಪೂರ್ವ ಹಸ್ತಪ್ರತಿಗಳು ಮತ್ತು ಪುರಾತನ ಕೃತಿಗಳನ್ನು ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ಟೀಕೆಟಿಪ್ಪಣಿಗಳೊಂದಿಗೆ ಸಂಪಾದನೆ ಮಾಡುವುದು ಮತ್ತು ಪ್ರಕಟಿಸುವುದು.

೧೪. ಇರುವ ಎಲ್ಲಾ ಹಸ್ತಪ್ರತಿಗಳ ಮತ್ತು ಸಂಸ್ಕೃತ ಆಕರಗ್ರಂಥಗಳ ಭಂಡಾರವನ್ನು ಕಂಪ್ಯೂಟರ್‌ಗೆ ಅಳವಡಿಸಿ ಅತ್ಯಾಧುನಿಕ ರೀತಿಯಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವುದು.

೧೫. ವಿಶ್ವವಿದ್ಯಾಲಯ/ವಿಭಾಗಗಳ ಮೂಲಕ ಅತ್ಯುನ್ನತ ಮಟ್ಟದ ಶೋಧಪತ್ರಿಕೆಗಳನ್ನು ಹೊರತರುವುದು.

೧೬. ಪ್ರಾಚೀನ ಜ್ಞಾನಪದ್ಧತಿಗಳಲ್ಲಿ ಇರುವ ಸಂದೇಶವನ್ನು ಉತ್ತೇಜಿಸುವ ದೃಷ್ಟಿಯಿಂದ ವಿಚಾರಗೋಷ್ಠಿಗಳು, ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ವಿದ್ವದ್ಗೋಷ್ಠಿಗಳನ್ನು ಏರ್ಪಡಿಸುವುದು.

೧೭. ವಿಶ್ವವಿದ್ಯಾಲಯಗಳು ನಿರ್ವಹಿಸಿಕೊಂಡು ಬರದ ವಿದ್ಯಾಸಂಸ್ಥೆಗಳನ್ನು ಸಂಯೋಜಿತ ಕಾಲೇಜುಗಳು ಮತ್ತು ಪಾಠಶಾಲೆಗಳಾಗಿ ವಿಶ್ವವಿದ್ಯಾಲಯದ ವಿಶೇಷ ಅವಕಾಶಗಳಿಗೆ ಸೇರಿಸಿಕೊಳ್ಳುವುದು.

೧೮. ತನ್ನ ಪ್ರಾಧ್ಯಾಪಕರುಗಳು ಇತರ ಬೋಧಕರು ಮತ್ತು ವಿಭಾಗಗಳು ಹಾಗೂ ವಿಶೇಷ ಸಂಶೋಧನಾ ಸಂಸ್ಥೆಗಳ ಮೂಲಕ ಆ ಸಂಯೋಜಿತ ಕಾಲೇಜುಗಳು / ಪಾಠಶಾಲೆಗಳಿಗೆ ಅಗತ್ಯವಾಗಬಹುದಾದಂಥ ಬೋಧನೆ ಮತ್ತು ಮಾರ್ಗದರ್ಶನವನ್ನು ಒದಗಿಸುವುದು.

೧೯. ವಿಶ್ವವಿದ್ಯಾಲಯದ ಮೇಲ್ಕಂಡ ಧ್ಯೇಯೋದ್ದೇಶಗಳಿಗೆ ಸಂಬಂಧಪಟ್ಟ ಅಥವಾ ಪ್ರಾಸಂಗಿಕವಾದ ಇತರೆ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವುದು.

೨೦. ಯಾವುದೇ ವಿದ್ಯಾಸಂಸ್ಥೆಗೆ, ಯಾವುದೇ ಉದ್ದೇಶಕ್ಕಾಗಿ ಪೂರ್ಣವಾಗಿ ಅಥವಾ ಭಾಗಶಃ ಶಾಸನಗಳ ಮೂಲಕ ಕಾಲದಿಂದ ಕಾಲಕ್ಕೆ ನಿಯಮಿಸಬಹುದಾದಂಥ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಮಾನ್ಯತೆ ನೀಡುವುದು ಮತ್ತು ಅದನ್ನು ನಿರ್ವಹಿಸಿಕೊಂಡು ಬರುವುದು ಹಾಗೂ ಅಂಥ ಮಾನ್ಯತೆಯನ್ನು ಹಿಂತೆಗೆದುಕೊಳ್ಳುವುದು.

೨೧. ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳನ್ನು ಉತ್ತೇಜಿಸುವ ಸಲುವಾಗಿ ಅವಶ್ಯವಾಗಬಹುದಾದ ಮೇಲೆ ಹೇಳಿದ ಅಧಿಕಾರಗಳಿಗೆ ಅವು ಪ್ರಾಸಂಗಿಕವಾಗಿರುವಂಥ ಅಥವಾ ಆಗಿರದಂಥ ಕಾರ್ಯಗಳನ್ನು ಅಥವಾ ಇತರ ಕೆಲಸಗಳನ್ನು ಮಾಡುವುದು.

೨೨. ಶಾಸನಗಳ ಮೂಲಕ ವಿಶ್ವವಿದ್ಯಾಲಯದ ಪ್ರಾಧಿಕಾರಗಳೆಂದು ಘೋಷಿಸಲಾದಂಥ ನಿಕಾಯಗಳನ್ನು ನಿರ್ವಹಿಸಿಕೊಂಡು ಬರುವುದು.

೨೩. ಪ್ರೌಢ ಸಂಶೋಧನೆಗಳನ್ನು ನಡೆಸುವುದಕ್ಕಾಗಿ ವಿವಿಧ ವಿದ್ಯಾವಿಷಯಗಳಲ್ಲಿ ’ಅಧ್ಯಯನಪೀಠ’ಗಳನ್ನು ಸ್ಥಾಪಿಸುವುದು.

ವಿಶ್ವವಿದ್ಯಾಲಯವು ಕೆಳಕಂಡ ಶೈಕ್ಷಣಿಕ ಕಾರ್ಯಗಳ ಮೂಲಕ ಮೇಲಿನ ಧ್ಯೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದೆ

೧. ಪಾಠಶಾಲೆ ಮತ್ತು ಕಾಲೇಜುಗಳನ್ನು ಮೊದಲು ವ್ಯವಸ್ಥೀಕರಣ ಮತ್ತು ಸಬಲೀಕರಣಗೊಳಿಸುವುದು.

೨. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವುದು.

೩. ಪಾಠಶಾಲೆ ಮತ್ತು ಕಾಲೇಜುಗಳಲ್ಲಿ ಉತ್ತಮ ಗ್ರಂಥಭಂಡಾರ ರೂಪಿಸುವುದು.

೪. ಕಾಲೇಜುಗಳಲ್ಲಿ ಉತ್ತಮ ವಿದ್ಯಾರ್ಥಿನಿಲಯವನ್ನು ರೂಪಿಸಿ ಸ್ಥಳೀಯ ದಾನಿಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಅಶನ-ವಸನಗಳನ್ನು ನೀಡುವುದು.

೫. ಪ್ರತಿ ತಾಲ್ಲೂಕು, ಜಿಲ್ಲೆಗಳಲ್ಲಿ ಸಂಸ್ಕೃತೋತ್ಸವಗಳನ್ನು ವಿದ್ಯಾರ್ಥಿಗಳಿಂದ ನಡೆಸಿ ಅನೇಕ ಬಗೆಯ ಸಂಸ್ಕೃತ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹಿಸುವುದು.

೬. ಪ್ರತಿವರ್ಷ ಬಿ.ಎ. ವಿದ್ವನ್ಮಧ್ಯಮಾ, ಎಂ.ಎ. ವಿದ್ವದುತ್ತಮಾ ಮತ್ತು ವೇದಶಾಖೆಗಳ ಅಗ್ರಪಂಕ್ತಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ದತ್ತಿ ನಿಧಿಗಳಿಂದ, ಪೀಠಗಳಿಂದ ಮತ್ತು ಸಾರ್ವಜನಿಕ ವಲಯಗಳಿಂದ ನಗದು ರೂಪದಲ್ಲಿ ಪ್ರೋತ್ಸಾಹಿಸುವುದು ಮತ್ತು ಪ್ರಮಾಣಪತ್ರಗಳನ್ನು ನೀಡುವುದು.

೭. ದಲಿತ ಮತ್ತು ಹಿಂದುಳಿದ ವರ್ಗದಲ್ಲಿ ಸಂಸ್ಕೃತ ಕಲಿಯುವವರಿಗೆ ಪ್ರತ್ಯೇಕವಾಗಿ ಸೌಲಭ್ಯಗಳನ್ನು ಕಲ್ಪಿಸುವುದು.

೮. ಸಂಸ್ಕೃತ ಗಮಕ ಸ್ಪರ್ಧೆ, ಸಂಸ್ಕೃತ ಗಾಯನ ಸ್ಪರ್ಧೆ ಮತ್ತು ಇತರ ಸಂಸ್ಕೃತ ಆಟೋಟ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸುವುದು.

೯. ಇಂಗ್ಲಿಷ್ ಹಾಗೂ ಕಂಪ್ಯೂಟರ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೂತನವಾಗಿ ಪತ್ರಿಕೆಗಳನ್ನು ರೂಪಿಸಿ ಸೇರಿಸುವುದು. ಇದನ್ನು ಕಾವ್ಯ, ಸಾಹಿತ್ಯ ಮತ್ತು ವಿದ್ವತ್ ಪದವಿಗಳಲ್ಲಿ ಕಡ್ಡಾಯಗೊಳಿಸುವುದು.

೧೦. ಪ್ರಥಮದಿಂದ ವಿದ್ವತ್ ಪದವಿಯವರೆಗೆ ವೈಜ್ಞಾನಿಕವಾಗಿ ಪಠ್ಯಪರಿಷ್ಕರಣ. ಪ್ರಾಚೀನ ಜ್ಞಾನವನ್ನು ಇಟ್ಟುಕೊಂಡು ನೂತನ ಜ್ಞಾನದ ಸೇರ್ಪಡೆ ಆಗುವಂತೆ ಪಠ್ಯಗಳನ್ನು ರೂಪಿಸುವುದು.

೧೧. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕಗಳಲ್ಲಿ ಸಂಸ್ಕೃತ ಉನ್ನತ ಸಂಶೋಧನ ಕೇಂದ್ರಗಳನ್ನು ತೆರೆದು ಅಲ್ಲಿ ಅಧ್ಯಯನಕ್ಕೆ, ಸಂಶೋಧನೆಗೆ ಹಿತವಾದ ವಾತಾವರಣವನ್ನು ರೂಪಿಸುವುದು ಹಾಗೂ ಸ್ಥಳೀಯ ಸಂಸ್ಕೃತಾಧ್ಯಯನ ಸಂಸ್ಥೆಗಳ ಜತೆ ಸಹಭಾಗಿತ್ವ ವಹಿಸುವುದು.

೧೨. ಐವತ್ತು ವರ್ಷಗಳಿಗೂ ಹಳೆಯದಾದ ಎಲ್ಲಾ ಸಂಸ್ಕೃತ ಪಾಠಶಾಲೆಗಳಿಗೆ ಪ್ಯಾಕೇಜ್ ಪ್ರೋಗ್ರಾಂಗಳನ್ನು ರೂಪಿಸುವುದು. ಆ ಪಾಠಶಾಲೆಗಳಿಗೆ ಅಲ್ಮೇರಾ, ಸಂಸ್ಕೃತ ಗ್ರಂಥ ಮತ್ತು ಪೀಠೋಪಕರಣಗಳನ್ನು ಒದಗಿಸುವುದಕ್ಕೆ ಪ್ರೋತ್ಸಾಹ ನೀಡುವುದು.

೧೩. ಬಿ.ಎ ಮತ್ತು ಎಂ.ಎ ಪದವಿ ಪಡೆದವರಿಗೆ ಇರುವ ಆದ್ಯತೆಗಳನ್ನು ವಿದ್ವತ್ ಪದವಿ ಪಡೆದವರಿಗೂ ಕಲ್ಪಿಸಿಕೊಡುವುದು.

ಲಾಂಛನ ಮತ್ತು ಧ್ಯೇಯವಾಕ್ಯ


Logo

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಲಾಂಛನವನ್ನು ರೂಪಿಸಿಕೊಟ್ಟವರು ಕರ್ನಾಟಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಶ್ರೀ ಮುರಳೀಧರ ವಿ ರಾಥೋಡ್. ಇವರು ರೂಪಿಸಿರುವ ಲಾಂಛನದ ಪರಿಕಲ್ಪನೆಯು ವಿಶಿಷ್ಟವಾಗಿದೆ. ವಿಶ್ವವಿದ್ಯಾಲಯದ ಶೀರ್ಷಿಕೆಯು ದೇವನಾಗರಿ, ಆಂಗ್ಲ ಮತ್ತು ಕನ್ನಡ ಲಿಪಿಗಳಲ್ಲಿ ಇದೆ. ಈ ವಿಶ್ವವಿದ್ಯಾಲಯವು ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ಜ್ಞಾನವನ್ನು ಆಧಾರವಾಗಿ ಇಟ್ಟುಕೊಂಡಿರುವುದರಿಂದ ಅದರ ಸಂಕೇತವಾಗಿ ದೇವನಾಗರಿ ಲಿಪಿಯನ್ನು ಬಳಸಿಕೊಳ್ಳಲಾಗಿದೆ. ದೇವನಾಗರಿಯು ಭಾರತದ ಲಿಪಿಗಳಿಗೆ ಆಧಾರಭೂತವಾಗಿದೆ. ಈಗಿನ ಔತ್ತರೇಯ ಲಿಪಿಗಳಿಗೆ ಇದೇ ಪ್ರಮುಖ ಆಧಾರ. ಪ್ರಾಚೀನ ಕಾಲದಿಂದಲೂ ಈ ಲಿಪಿಯನ್ನು ಬಳಸಿಕೊಳ್ಳಲಾಗಿದೆ. ವಿಶ್ವವಿದ್ಯಾಲಯವು ದೇವನಾಗರಿಯ ಮೂಲಕ ದೇವಭಾಷೆಯ ಔನ್ನತ್ಯವನ್ನು ಸಾಂಕೇತಿಕವಾಗಿ ವಿವರಿಸುತ್ತದೆ. ವಿಶ್ವವಿದ್ಯಾಲಯದ ವಿಸ್ತಾರ ಮತ್ತು ಜಾಗತಿಕನೆಲೆಗಳನ್ನು ಆಂಗ್ಲಲಿಪಿಯ ಮೂಲಕ ಸಂಕೇತಿಸಲಾಗಿದೆ. ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಕನಸಿನ ಕೂಸಾಗಿರುವುದರಿಂದ ಹಾಗೂ ಕರ್ನಾಟಕದ ಸಂಸ್ಕೃತ ವಿದ್ವಾಂಸರ ನೆಲೆ-ಬೆಲೆಗಳನ್ನು ಸಂಕೇತಿಸುವುದರ ಜೊತೆಗೆ ಕನ್ನಡ ಮತ್ತು ಸಂಸ್ಕೃತದೊಡನೆ ಸಾಮರಸ್ಯವನ್ನು ಬೆಳೆಸುವ ಉದ್ದೇಶವನ್ನು ಈ ಶೀರ್ಷಿಕೆ ಹೊಂದಿದೆ.

ಈ ಲಾಂಛನದಲ್ಲಿ ಪ್ರಮುಖವಾಗಿ ಬಿಂಬಿಸಲಾಗಿರುವ ಮಯೂರಪಕ್ಷಿಯು ಭಾರತದ ರಾಷ್ಟ್ರಪಕ್ಷಿ. ಈ ಪಕ್ಷಿಯು ಸೃಜನಶೀಲತೆ ಮತ್ತು ಸೌಂದರ್ಯದ ಪ್ರತೀಕ. ವಿಶ್ವವಿದ್ಯಾಲಯವು ಅನೇಕ ಜ್ಞಾನಗಳ ಬೆಳವಣಿಗೆಗೆ ಕಾರಣವಾಗುವುದರಿಂದ ಮಯೂರ ಪಕ್ಷಿಯ ಮೂಲಕ ಈ ಜ್ಞಾನದ ಅಗಾಧತೆಯನ್ನು ಸಾಂಕೇತಿಕವಾಗಿ ಸೂಚಿಸಲಾಗಿದೆ. ಮಾನವ ಜೀವನವು ಜ್ಞಾನದೊಡನೆ ಸಂಬಂಧವಾಗಿರಬೇಕೆಂಬ ಧ್ಯೇಯವನ್ನು ಈ ಪಕ್ಷಿಯು ಪ್ರತಿಬಿಂಬಿಸುತ್ತದೆ.

ಈ ಲಾಂಛನಕ್ಕೆ ವ್ಯಾಸಮಹರ್ಷಿಗಳ ಶ್ರೀಮನ್ಮಹಾಭಾರತದಿಂದ ಧ್ಯೇಯವಾಕ್ಯವನ್ನು ಆರಿಸಿಕೊಳ್ಳಲಾಗಿದೆ. ಆ ಧ್ಯೇಯವಾಕ್ಯವನ್ನು ದೇವನಾಗರಿ ಲಿಪಿಯಲ್ಲಿ ಇರಿಸಲಾಗಿದೆ. ‘ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ’ ಎಂಬುದು ಜ್ಞಾನಕ್ಕೆ ಕೊಟ್ಟ ಆತ್ಯಂತಿಕ ನಿಲುವಾಗಿದೆ. ಪ್ರಾಚೀನ ಮತ್ತು ಆಧುನಿಕ ಜ್ಞಾನ ಸಮ್ಮಿಳನಗೊಳ್ಳಬೇಕೆಂಬ ಆಶಯವನ್ನು ಈ ಧ್ಯೇಯವಾಕ್ಯವು ಸಂಕೇತಿಸುತ್ತದೆ. ಜ್ಞಾನವೆಂಬ ದೀಪ ಸದಾ ಉಜ್ಜ್ವಲವಾಗಿರಲಿ ಎಂಬ ಮಾತು ಕೇವಲ ದೇಶಕಾಲಬದ್ಧವಾಗದೆ ದೇಶಕಾಲಾತೀತವಾಗಿ ಬೆಳಗುತ್ತದೆಂಬ ಆಶಯವನ್ನು ಈ ಧ್ಯೇಯವಾಕ್ಯವು ಹೊಂದಿದೆ. ದೀಪವು ನಮ್ಮ ಕಣ್ಣೆದುರಿಗೆ ಬೆಳಗುತ್ತದೆ. ಆದರೆ ಪ್ರದೀಪವು ಆರದಿರುವಂತೆ ಸದಾ ಬೆಳಗುತ್ತದೆ. ಇಲ್ಲಿರುವ ದೀಪವು ಎಣ್ಣೆಯಿಂದ ಕೂಡಿದ ದೀಪವಲ್ಲ; ಜ್ಞಾನರೂಪ ಎಣ್ಣೆಯಿಂದ ಕೂಡಿದ್ದು, ಅದು ಎಂದೂ ಆರದಂತೆ ಬೆಳಗುತ್ತಿರುತ್ತದೆ ಎಂಬ ಆಶಯವನ್ನು ಮಹಾಭಾರತವು ಈ ಧ್ಯೇಯವಾಕ್ಯದ ಮೂಲಕ ಸೂಚಿಸುತ್ತಿದೆ.


Comments are closed.