ಈ-ಗ್ರಂಥಾಲಯ

(ಅಂಗೈಯಲ್ಲಿ ವಿಶ್ವಕೋಶ)

ಗಣಕ ಪ್ರಪಂಚದಲ್ಲಿ ಸಂಸ್ಕೃತ
(ಲಭ್ಯವಿರುವ ಸಂಸ್ಕೃತವಾಙ್ಮಯದ e-text ಮೂಲಕ ಬೇಕಾದ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ಹುಡುಕುವ ವಿಧಾನ)

ಭೂಮಿಕೆ:
ವಿದ್ಯಾಸಂಸ್ಥೆಗಳಿಗೆ, ಅದರಲ್ಲೂ ವಿಶ್ವವಿದ್ಯಾಲಯವೊಂದಕ್ಕೆ ಗ್ರಂಥಾಲಯ ಅತ್ಯಂತ ಅವಶ್ಯಕ. ಒಂದು ಒಳ್ಳೆಯ ಗ್ರಂಥಾಲಯವನ್ನು ನಿರ್ಮಿಸುವುದು, ಅದನ್ನು ರಕ್ಷಿಸುವುದು, ಬೇಕಾದವರಿಗೆ ಬೇಕಾದ ಪುಸ್ತಕವನ್ನು ನೀಡುವುದು, ಇವುಗಳ ದಾಖಲೆಗಳನ್ನು ಸರಿಯಾಗಿ ರಕ್ಷಿಸಿಡುವುದು – ಇವೆಲ್ಲ ಸವಾಲಿನ ಕೆಲಸಗಳು. ಈ ಹಿನ್ನೆಲೆಯಲ್ಲಿ, ಇಂದಿನ ಸಂಗಣಕಯುಗದಲ್ಲಿ, ಈ-ಗ್ರಂಥಾಲಯದ ವಿಚಾರ ಬಹಳ ಪ್ರಸ್ತುತ.

ಈ-ಗ್ರಂಥಾಲಯ ಎಂದರೇನು?
e ಎನ್ನುವುದು electronic ಎನ್ನುವುದರ ಸಂಕ್ಷಿಪ್ತರೂಪ. ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಇಟ್ಟಿರುವ ಗ್ರಂಥಗಳ ಆಲಯ ಈ-ಗ್ರಂಥಾಲಯ. ಇದಕ್ಕೆ ಸ್ಥಳದ ಅಪೇಕ್ಷೆ ಬಹಳ ಕಡಿಮೆ. ಸಂರಕ್ಷಣೆಯ ವೆಚ್ಚ ಅತ್ಯಲ್ಪ. ಒಂದೇ ಪುಸ್ತಕವನ್ನು ಎಷ್ಟು ಜನ ಬೇಕಾದರೂ ಪಡೆಯಬಹುದು.

ಸಂಸ್ಕೃತದಲ್ಲಿ ಇ -ಗ್ರಂಥಾಲಯ:
ಭಾಷಾಕ್ಷೇತ್ರದಲ್ಲಿ ಕಂಪ್ಯೂಟರಿನ ಬಳಕೆ ಆರಂಭವಾದ ಹೊಸತರಿಂದಲೂ ಸಂಸ್ಕೃತದ ಕೆಲಸ ನಡೆದುಕೊಂಡು ಬಂದಿದೆ. ವಿಶ್ವದಾದ್ಯಂತ ಇರುವ ಸಂಸ್ಕೃತಪ್ರೇಮಿಗಳು ಆತ್ಮಸಂತೋಷಕ್ಕಾಗಿ, ಸಾರಸ್ವತ ಸೇವೆಯೆಂಬ ಭಾವನೆಯಿಂದ ಅಥವಾ ವಿವಿಧ ಯೋಜನೆಗಳ ಅಂತರ್ಗತವಾಗಿ ಸಂಸ್ಕೃತವಾಙ್ಮಯದ ಅಪೂರ್ವ ಸಂಪತ್ತನ್ನು ಟೈಪ್ ಮಾಡಿ ಅಂತರ್ಜಾಲದಲ್ಲಿ ಸಿಗುವಂತೆ ಮಾಡಿದ್ದಾರೆ. ಲಾಭೋದ್ದೇಶವಿಲ್ಲದ ಶೋಧನಾಕಾರ್ಯಗಳಿಗೆ ಅದನ್ನು ಧಾರಾಳವಾಗಿ ಉಪಯೋಗಿಸಬಹುದು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಸಂಸ್ಕೃತ ಕಾಲೇಜು ಹೀಗೆ ಲಭ್ಯವಿರುವ ಸಾವಿರಾರು ಅಪೂರ್ವ ಗ್ರಂಥಗಳನ್ನು ಹಲವಾರು ವರ್ಷಗಳಿಂದ ಒಂದೆಡೆ ಸಂಗ್ರಹಿಸಿದೆ. ಈ ಸಂಗ್ರಹವನ್ನು ಆಧರಿಸಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಈ-ಗ್ರಂಥಾಲಯವನ್ನು ಆರಂಭಿಸುವ ಉದ್ದೇಶವಿದೆ. ಇದು ಮೊದಲ ಹೆಜ್ಜೆಯಷ್ಟೆ. ಇದೇ ವಿಧದಲ್ಲಿ ಇನ್ನೂ ಬೇಕಾದಷ್ಟು ಜನಗಳು ಸಂಗ್ರಹ ಮಾಡಿರಬಹುದು. ಕಾಲಕ್ರಮದಲ್ಲಿ ಅವೆಲ್ಲ ಸೇರಿದರೆ ಸಂಸ್ಕೃತಕ್ಷೇತ್ರಕ್ಕೆ ಮತ್ತೂ ದೊಡ್ಡ ಲಾಭವಾಗುವುದರಲ್ಲಿ ಸಂಶಯವಿಲ್ಲ.

ಇ-ಗ್ರಂಥಾಲಯದ ಉಪಯೋಗ:
೧. ಸದ್ಯ ಇ-ಗ್ರಂಥಾಲಯದಲ್ಲಿ ೪೦೦೦ಕ್ಕೂ ಅಧಿಕ ಫೈಲುಗಳಿವೆ. ವೇದ-ಉಪನಿಷತ್ತು-ವೇದಾಂಗ-ಚತುರ್ದಶ ವಿದ್ಯಾಸ್ಥಾನಗಳು-ಹೀಗೆ ಪ್ರಾಚೀನಭಾರತದ ಜ್ಞಾನವಿಜ್ಞಾನಗಳಿಗೆ ಸಂಬಂಧಿಸಿದ, ಇಂದು ಮಾರುಕಟ್ಟೆಯಲ್ಲಿ ಹಣ ನೀಡಿದರೂ ಸಿಗದ ಅತ್ಯಪೂರ್ವಗ್ರಂಥಗಳು ಇದರಲ್ಲಿ ಸೇರಿವೆ. ಇವೆಲ್ಲ ಸಾವಿರಾರು ವರ್ಷಗಳ ಹಿಂದೆ ರಚಿತವಾಗಿದ್ದು ಕಾಪಿರೈಟ್ ಸಮಸ್ಯೆಯಿಂದ ಮುಕ್ತವಾಗಿವೆ.

೨. ಕಂಪ್ಯೂಟರಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ನಮಗೆ ಬೇಕಾದ ವಿಷಯಗಳನ್ನು ಈ ಗ್ರಂಥಗಳಲ್ಲಿ ಹುಡುಕುವುದು ಬಹಳ ಸುಲಭ. ಉದಾ – ಒಂದು ಲಕ್ಷ ಶ್ಲೋಕಗಳಿರುವ ಮಹಾಭಾರತದಲ್ಲಿ ಕೃಷಿಯ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ಕರಾರುವಾಕ್ಕಾಗಿ ಅತ್ಯಲ್ಪ ಸಮಯದಲ್ಲಿ ಈ-ಗ್ರಂಥಾಲಯದ ಸಹಾಯದಿಂದ ಹುಡುಕಬಹುದು.

೩. ಇ-ಗ್ರಂಥಾಲಯದ ಮೂಲಕ ನಾವು ಸಂಸ್ಕೃತಕ್ಷೇತ್ರವನ್ನು ಉಳಿದೆಲ್ಲ ಕ್ಷೇತ್ರಗಳ ಜೊತೆಗೆ ಜೋಡಿಸುವ ಮಹತ್ತರ ಕೆಲಸವನ್ನು ಮಾಡಬಹುದು. ವಿಶ್ವವಿದ್ಯಾಲಯದ ಸ್ಥಾಪನೆಯ ಮೊದಲು ಎದ್ದಿದ್ದ ಅನೇಕ ಪ್ರಶ್ನೆ/ಆಕ್ಷೇಪಗಳಿಗೆ ತಕ್ಕಮಟ್ಟಿನ ಉತ್ತರವನ್ನು ಇದರ ಸಹಾಯದಿಂದ ನೀಡಬಹುದು. ಸಮಾಜವಿಜ್ಞಾನ-ಆರೋಗ್ಯ(ಆಯುರ್ವೇದ)-ರಾಜನೀತಿ-ಶಿಕ್ಷಣ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ನಡೆಸುತ್ತಿರುವವರು ಇದರ ಸಹಾಯದಿಂದ ಪ್ರಾಚೀನತಮ ಉಲ್ಲೇಖಗಳನ್ನು ನೀಡಿ, ಆ ಬಗ್ಗೆ ಚರ್ಚಿಸಿ ತಮ್ಮ ಸಂಶೋಧನೆಗಳ ಮಹತ್ವವನ್ನು ಹೆಚ್ಚಿಸಬಹುದು.

ಇ-ಗ್ರಂಥಾಲಯದ ಭವಿಷ್ಯದ ಯೋಜನೆಗಳು:
೧. ಈಗಿರುವ ಸಂಗ್ರಹವನ್ನು ಹೆಚ್ಚಿಸುತ್ತಾ ಹೋಗುವುದು.
೨. ಈಗ ಹೆಚ್ಚಿನ ಗ್ರಂಥಗಳು pdf ರೂಪದಲ್ಲಿವೆ. ಕ್ರಮೇಣ search ಮಾಡಲು ಅನುಕೂಲವಾಗುವಂತೆ ಗ್ರಂಥಗಳನ್ನು ಸಿದ್ಧಪಡಿಸುವುದು.
೩. ನಾಡಿನ ವಿವಿಧೆಡೆ ಈ-ಗ್ರಂಥಾಲಯ ಸಿಗುವಂತೆ ವ್ಯವಸ್ಥೆ ಮಾಡುವುದು.
೪. ಸಂಸ್ಕೃತ ಕ್ಷೇತ್ರದಲ್ಲಿ ಇದರ ಬಳಕೆ ಹೆಚ್ಚುವಂತೆ ಮಾಡಿ, ತನ್ಮೂಲಕ ಸಂಸ್ಕೃತದ ಸಂಶೋಧನೆ-ವಿಚಾರಗೋಷ್ಠಿಗಳ ಮೌಲ್ಯವನ್ನು ಹೆಚ್ಚಿಸುವುದು.

ಈ-ಗ್ರಂಥಾಲಯವನ್ನು ಉಪಯೋಗಿಸುವುದು ಹೇಗೆ?
ನಿಮಗೆ ಅಗತ್ಯವಾದ ಯಾವುದೇ ಗ್ರಂಥ/ವಿಷಯದ ಮಾಹಿತಿಗಾಗಿ ಈ ಕೆಳಗಿನ ಐಡಿಗಳಿಗೆ ಈಮೈಲ್ ಕಳಿಸಿ. ನಿಮಗೆ ಬೇಕಾದುದನ್ನು ಪಡೆಯುವಲ್ಲಿ ನಾವು ಸಹಾಯ ಮಾಡುವೆವು.
ಈಮೈಲ್ – info.elib@gmail.com, skt.directorate@gmail.com
ದೂರವಾಣಿ – ೦೮೦ ೨೬೭೦೫೫೯೬

Comments are closed.