ಸಂಸ್ಕೃತ ಪುಸ್ತಕ ಪುರಸ್ಕಾರ ಯೋಜನೆ

ಸಂಸ್ಕೃತ ಗ್ರಂಥ ಪುರಸ್ಕಾರ ಸಮಾರಂಭ ೨೦೧೨ರ ಚಿತ್ರಗಳು ಮತ್ತು ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದಲ್ಲಿ ಸಂಸ್ಕೃತ ಶಿಕ್ಷಣ ಮತ್ತು ಸಂಶೋಧನೆಗಳ ಬಲವರ್ಧನೆಗಾಗಿ ರಾಜ್ಯಸರ್ಕಾರವು ಕರ್ನಾಟಕ ಸಂಸ್ಕೃತವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಸಂಸ್ಕೃತ ಭಾಷೆಯ ಪ್ರಸಾರ ಮತ್ತು ಅಭಿವೃದ್ಧಿಗಳ ದೃಷ್ಟಿಯಿಂದ ವಿಶ್ವವಿದ್ಯಾಲಯವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ‘ಸಂಸ್ಕೃತ ಪುಸ್ತಕ ಪುರಸ್ಕಾರ’ ಯೋಜನೆಯೂ ಒಂದು.

ಹಿನ್ನೆಲೆ ಮತ್ತು ಉದ್ದೇಶ

ಕರ್ನಾಟಕ ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯ ರಚನೆ/ಗ್ರಂಥರಚನೆ ಮತ್ತು ಪ್ರಕಾಶನದ ಉದ್ಯಮವು ಬಹಳ ದೀರ್ಘ ಇತಿಹಾಸವನ್ನು ಹೊಂದಿದೆ. ಇಂದಿಗೂ ಅನೇಕ ವಿದ್ವಾಂಸರು ಸಂಸ್ಕೃತ ವಾಙ್ಮಯದ ಗದ್ಯ, ಪದ್ಯ ಇತ್ಯಾದಿ ಪ್ರಕಾರಗಳ ರಚನೆಯಲ್ಲಿ ತೊಡಗಿದ್ದಾರೆ. ಅನೇಕ ಯುವಪ್ರತಿಭೆಗಳೂ ಇಂಥ ಗ್ರಂಥರಚನೆಯಲ್ಲಿ ತಮ್ಮ ಕೌಶಲ ತೋರಿಸುತ್ತಿದ್ದಾರೆ. ಪ್ರತಿವರ್ಷ ಸಂಸ್ಕೃತವಾಙ್ಮಯಪ್ರಪಂಚಕ್ಕೆ ಕರ್ನಾಟಕರಾಜ್ಯದ ಗ್ರಂಥಕರ್ತೃಗಳ ಕೊಡುಗೆಯೂ ಗಣನೀಯವಾಗಿದೆ. ಇಂತಹ ಸೃಜನಶೀಲತೆಗೆ ರಾಜ್ಯಮಟ್ಟದಲ್ಲಿ ಯಾವುದೇ ಪ್ರೋತ್ಸಾಹ ಪುರಸ್ಕಾರಗಳು ದೊರಕುತ್ತಿಲ್ಲ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಇಂತಹ ಸಮಕಾಲೀನ ಸಂಸ್ಕೃತ ಗ್ರಂಥಗಳನ್ನು ಪುರಸ್ಕರಿಸಲು ಪ್ರಶಸ್ತಿ ಪತ್ರ, ಶಾಲು ಹಾಗೂ ಹತ್ತು ಸಾವಿರ ನಗದು ಇವುಗಳನ್ನೊಳಗೊಂಡ ‘ಸಂಸ್ಕೃತ ಪುಸ್ತಕ ಪುರಸ್ಕಾರ’ ಯೋಜನೆಯನ್ನು ನಿರ್ವಹಿಸಲು ಉದ್ದೇಶಿಸಿದೆ.

ಪುರಸ್ಕಾರಕ್ಕೆ ಅರ್ಹವಾದ ವಾಙ್ಮಯಪ್ರಕಾರಗಳು

ಸಂಸ್ಕೃತ ವಾಙ್ಮಯ ಪ್ರಕಾರವು ಬಹು ವೈವಿಧ್ಯವನ್ನು ಹೊಂದಿದೆ. ಇತ್ತೀಚಿನ ಇತರ ಭಾಷೆಗಳ ಸಾಹಿತ್ಯದ ರಚನೆಯಿಂದ ಪ್ರಭಾವಿತರಾದ ಸಂಸ್ಕೃತ ಲೇಖಕರ ಹೊಸ ಪ್ರಯೋಗಗಳಿಂದಾಗಿ ಹೊಸ ಹೊಸ ಪ್ರಕಾರಗಳೂ ಸಂಸ್ಕೃತ ಸಾಹಿತ್ಯ ಪ್ರಪಂಚಕ್ಕೆ ಸೇರಿಕೊಂಡಿದೆ. ಎಲ್ಲ ವಿಧವಾದ ಪ್ರಕಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಕೆಳಗಿನ ವಾಙ್ಮಯಪ್ರಕಾರಗಳನ್ನು ಪುರಸ್ಕಾರಕ್ಕೆ ಪ್ರಸ್ತಾವಿಸಲಾಗಿದೆ.

೧. ಕಾದಂಬರೀ ಸಾಹಿತ್ಯ
೨. ಕಥಾ ಸಾಹಿತ್ಯ
೩. ಕಾವ್ಯ ಸಾಹಿತ್ಯ
೪. ನಾಟಕ ಸಾಹಿತ್ಯ
೫. ಗ್ರಂಥ ಸಂಪಾದನ ಸಾಹಿತ್ಯ
೬. ಶಾಸ್ತ್ರ ಸಾಹಿತ್ಯ
೭. ಪ್ರಬಂಧ ಸಾಹಿತ್ಯ
೮. ಅನುವಾದ ಸಾಹಿತ್ಯ
೯. ವಿಜ್ಞಾನ ಸಾಹಿತ್ಯ
೧೦. ವಿಮರ್ಶಾತ್ಮಕ ಸಾಹಿತ್ಯ

ಪುರಸ್ಕಾರದ ನಿಯಮಾವಳಿ

೧. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಪ್ರತಿವರ್ಷ ಶ್ರಾವಣ ಮಾಸದ ಸಂಸ್ಕೃತೋತ್ಸವದ ಸಂದರ್ಭದಲ್ಲಿ ನೀಡುವ ಈ ಪುರಸ್ಕಾರಗಳಿಗೆ ನೇರವಾಗಿ ಲೇಖಕರಿಂದ/ಪ್ರಕಾಶಕರಿಂದ ಅರ್ಜಿ ಅಥವಾ ಇತರ ವಿದ್ವಾಂಸರಿಂದ ಶಿಫಾರಸ್ಸು ಇವುಗಳ ಆಧಾರದ ಮೇಲೆ ಅರ್ಹ ಪುಸ್ತಕಗಳನ್ನು ಪರಿಗಣಿಸಲಾಗುತ್ತದೆ.

೨. ಈ ಪುರಸ್ಕಾರಗಳು ಕರ್ನಾಟಕದ ಯಾವುದೇ ಭಾಗದಲ್ಲಿ ವಾಸವಾಗಿರುವ/ಉದ್ಯೋಗದಲ್ಲಿರುವ ಮೂಲ ಲೇಖಕರಿಗೆ/ಸಂಶೋಧಕರಿಗೆ/ಗ್ರಂಥಕರ್ತೃಗಳಿಗೆ ಮಾತ್ರ ನೀಡಲಾಗುತ್ತದೆ.

೩. ಈ ಪುರಸ್ಕಾರಗಳಿಗೆ ಪುಸ್ತಕಗಳ ಆಯ್ಕೆಯನ್ನು ಕುಲಪತಿಗಳು ನಿಯೋಜಿಸಿದ ತಜ್ಞ ಸಮಿತಿಯು ಮಾಡುತ್ತದೆ. ಅದನ್ನು ಕುಲಪತಿಗಳು ಅನುಮೋದಿಸುತ್ತಾರೆ. ಈ ಬಗ್ಗೆ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ.

೪. ಪುರಸ್ಕಾರ ನೀಡುವ ವರ್ಷಕ್ಕಿಂತ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಪ್ರಕಟವಾದ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

೫. ಪುರಸ್ಕಾರವು ಪ್ರಶಸ್ತಿಪತ್ರ, ನಗದು ಮತ್ತು ಶಾಲನ್ನು ಒಳಗೊಂಡಿರುತ್ತದೆ.

೬. ಪುರಸ್ಕಾರಕ್ಕಾಗಿ ಪತ್ರಿಕಾಪ್ರಕಟನೆಯ ಮೂಲಕ ಪುಸ್ತಕಗಳನ್ನು ಆಹ್ವಾನಿಸಲಾಗುತ್ತದೆ.

೭. ಒಮ್ಮೆ ಒಂದು ಪ್ರಕಾರದಲ್ಲಿ ಪುರಸ್ಕಾರ ಪಡೆದ ವಿದ್ವಾಂಸರ ಹೆಸರನ್ನು ಮತ್ತೊಮ್ಮೆ ಅದೇ ಪ್ರಕಾರದಲ್ಲಿ ಪುಸ್ತಕಕ್ಕೆ ಪರಿಗಣಿಸಲಾಗುವುದಿಲ್ಲ.

೮. ಒಂದು ವಾಙ್ಮಯಪ್ರಕಾರದಲ್ಲಿ ಒಂದು ಪುರಸ್ಕಾರವನ್ನು ಮಾತ್ರ ನೀಡಲಾಗುತ್ತದೆ. ಒಂದು ವರ್ಷದಲ್ಲಿ ಪುರಸ್ಕಾರ ಪಡೆಯದ ಪುಸ್ತಕವು (ಅವಕಾಶವಿದ್ದಲ್ಲಿ) ಮುಂದಿನ ವರ್ಷದ ಪುರಸ್ಕಾರಕ್ಕೆ ಪುನಃ ಪರಿಗಣಿಸಲು ಅರ್ಹವಾಗಿರುತ್ತದೆ.

೯. ಸಂಶೋಧನಾ ಪ್ರಬಂಧ/ಲೇಖನ ಸಂಗ್ರಹ/ಸೃಜನಾತ್ಮಕ ರಚನೆಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ/ ಪ್ರೋತ್ಸಾಹ ಪುರಸ್ಕಾರವನ್ನು ನೀಡಲಾಗುವುದು.

೧೦. ಈ ಎಲ್ಲ ಪುರಸ್ಕಾರಗಳು ಕೇವಲ ಕರ್ನಾಟಕರಾಜ್ಯಕ್ಕೆ ಸೀಮಿತವಾಗಿರುತ್ತವೆ.

೧೧.ಶಾಸ್ತ್ರಸಾಹಿತ್ಯ ಎ೦ಬ ವಿಭಾಗದಲ್ಲಿ ಸ೦ಸ್ಕೃತ ಪುಸ್ತಕಗಳನ್ನೇ ಪರಿಗಣಿಸಬೇಕು ಎ೦ದಾದರೂ ಅವುಗಳ ಜೊತೆಗೆ ಕನ್ನಡ ಭಾಷೆಯಲ್ಲಿರುವ ಸ೦ಸ್ಕೃತಕ್ಕೆ ಸ೦ಬ೦ಧಿಸಿದ ಶ್ರೇಷ್ಠಮಟ್ಟದ ಗ್ರ೦ಥಗಳನ್ನೂ ಪರಿಗಣಿಸಬಹುದು.
ಉದಾ:ತೀ.ನ೦.ಶ್ರೀಯವರ ಭಾರತೀಯ ಕಾವ್ಯಮೀಮಾ೦ಸೆ

೧೨.ಶಾಸ್ತ್ರ ಗ್ರ೦ಥದ ಅನುವಾದವಾಗಿದ್ದರೆ ಅದರಲ್ಲಿ ಅನುವಾದದ ಪರಿಶ್ರಮ ಮಾತ್ರವಲ್ಲದೆ ಅನುವಾದದ ಕೌಶಲ್ಯವೂ ವಿಮರ್ಶನಾ ನೈಪುಣ್ಯವೂ ಪರಿಗಣಿಸುವ೦ತಿರಬೇಕು

೧೩.ಒಮ್ಮೆ ಪುರಸ್ಕಾರ ಪಡೆದ ಗ್ರ೦ಥಕೃತನಿಗೆ ಮು೦ದಿನ ೫ವರ್ಷಗಳಲ್ಲಿ ಮತ್ತೊಮ್ಮೆ ಪುರಸ್ಕಾರ ನೀಡುವುದಿಲ್ಲ

೧೪.ಸಮಿತಿಯ ಸದಸ್ಯರೂ ಈ ಬಗೆಯ ನಾಮಾ೦ಕನವನ್ನು ಮಾಡುವ ಅಧಿಕಾರವನ್ನು ಹೊ೦ದಿರುತ್ತಾರೆ

೧೫.ಆವೇದನೆಯನ್ನು ಮಾಡದ ಪುಸ್ತಕಗಳಿಗೂ ಪುರಸ್ಕಾರ ನೀಡುವ ಅಧಿಕಾರ ಸಮಿತಿಗೆ ಇರುತ್ತದೆ.

೧೬.ಆಯ್ಕೆಯ ಸಮಿತಿಯ ನಿರ್ಣಯವೇ ಅ೦ತಿಮ.

ಸಂಪರ್ಕಾಧಿಕಾರಿ

ಕುಲಸಚಿವರು
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ,
ಬೆಂಗಳೂರು – ೫೬೦೦೧೮
ದೂರವಾಣಿ – ೦೮೦ ೨೬೭೦೧೩೦೩
ಈಮೈಲ್ – karnatakasanskrituniversity@gmail.com

Comments are closed.